ನೀಕೊಲ್, ಚಾಲ್ರ್ಸ್ ಯೂಲ್ಸ್ ಹೆನ್ರಿ
	1866-1936. ಫ್ರಾನ್ಸಿನ ಏಕಾಣುಜೀವಿಶಾಸ್ತ್ರಜ್ಞ ಮತ್ತು ವೈದ್ಯ. ಪ್ಯಾರಿಸ್ಸಿನಲ್ಲಿ ವೈದ್ಯಪದವಿ ಪಡೆದು (1893) ರೂವೆನ್ನಿನ ಏಕಾಣುಜೀವಿಶಾಸ್ತ್ರ ಪ್ರಯೋಗಾಲಯದ ನಿರ್ದೇಶಕನಾಗಿ (1896) ಗಂಟಲಮಾರಿಯ ರೋಧ ರಸಿಕೆಯ ತಯಾರಿಕೆಯಲ್ಲಿ ಶ್ರಮಿಸಿದ. ನೀಕೊಲ್ ನಿರ್ದೇಶಕನಾಗಿ ನೇಮಕಗೊಂಡಿದ್ದ (1903) ಟ್ಯೂನಿಸಿನ ಪಾಸ್ತರ್ ಸಂಸ್ಥೆ ಸುಮಾರು ಮೂವತ್ತಮೂರು ವರ್ಷಗಳ ಕಾಲವೂ ಏಕಾಣುಜೀವಿಶಾಸ್ತ್ರ ಸಂಶೋಧನೆಗೆ ಪ್ರಪಂಚವಿಖ್ಯಾತವಾಗಿತ್ತು. ಆ ಅವಧಿಯಲ್ಲಿ ಟೈಫಸ್ ಜ್ವರದ ಸೋಂಕಿನ ಬಗ್ಗೆ ನೀಕೊಲ್ ಲಕ್ಷ್ಯಹರಿಸಿದ: ಆಸ್ಪತ್ರೆಯ ಹೊರಗೆ ಟೈಫಸ್ ಅತಿ ಸಾಂಕ್ರಾಮಿಕವಾಗಿತ್ತು; ರೋಗಿಗಳನ್ನು ನೋಡಲು ಹೋದವರೆಲ್ಲರಿಗೂ (ವೈದ್ಯರನ್ನೂ ಒಳಗೊಂಡಂತೆ) ಅದರ ಸೋಂಕು ಹರಡುತ್ತಿತ್ತು; ಒಮ್ಮೆ ರೋಗಿ ಆಸ್ಪತ್ರೆಯ ಆವಾರವನ್ನು ಹೊಕ್ಕನೊ ಆಗ ಟೈಫಸ್ ಎಂದೂ ಸಾಂಕ್ರಾಮಿಕವಾಗಿರಲಿಲ್ಲ. ಆದ್ದರಿಂದ ಸಂಧಿಸ್ಥ ಬಿಂದು ಇರುವುದು ರೋಗಿ ಆಸ್ಪತ್ರೆಯನ್ನು ಪ್ರವೇಶಿಸುವ ಹಂತದಲ್ಲಿ ಎಂಬುದಾಗಿ ನೀಕೊಲ್ ತರ್ಕಿಸಿದ. ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮುನ್ನ ರೋಗಿಯ ಬಟ್ಟೆ ಕಳಚಿಹಾಕಿ ಸಾಬೂನು ಮತ್ತು ನೀರಿನಿಂದ ಅವನನ್ನು ಉಜ್ಜಿ ಮೀಯಿಸುತ್ತಿದ್ದುದು ವಾಡಿಕೆ. ಆದ್ದರಿಂದ ಸೋಂಕನ್ನು ಹರಡುವ ಕಾರಕವೇನಿದ್ದರೂ ಅದು ರೋಗಿಯ ಬಟ್ಟೆಗಳಲ್ಲಿ ಹುದುಗಿರಬೇಕೆಂದು ನೀಕೊಲ್ ಊಹಿಸಿ ಮೈಮೇಲಿನ ಕೂರೆಗಳತ್ತ ಗಮನ ಸಾಂದ್ರೀಕರಿಸಿದ. ಪ್ರಯೋಗ ಪಶುಗಳ ಮೇಲೆ (ಚಿಂಪ್ಯಾಂಜೀ, ಗಿನಿ ಇಲಿ) ಮಾಡಿದ ವಿವಿಧ ಪ್ರಯೋಗಗಳಿಂದ ಈ ಊಹೆ ಸರಿಯೆಂದು ಸ್ಥಿರಪಟ್ಟಿತು. ಟೈಫಸ್ ಜ್ವರದ ಸೋಂಕು ಹರಡಲು ಕೂರೆಗಳು ಕಾರಣವೆಂಬ ಈ ಸಂಶೋಧನೆ ನೀಕೊಲ್‍ಗೆ ನೊಬಲ್ ಪಾರಿತೋಷಿಕವನ್ನು ಗಳಿಸಿಕೊಟ್ಟಿತು (1928). ಮಲೇರಿಯ ಜ್ವರ ಹರಡಲು ಸೊಳ್ಳೆಗಳೂ ಹೇಗೋ ಹಾಗೆ ಟೈಫಸ್ ಜ್ವರ ಹರಡಲು ಕಾರಣವಾದ ಕೂರೆಗಳ ನಿರ್ಮೂಲನ ಮಾತ್ರ ಸೊಳ್ಳೆಗಳ ನಿರ್ಮೂಲನಕ್ಕಿಂತ ಕಠಿಣವಾದದ್ದಾಗಿತ್ತು. ಒಂದನೆಯ ಮಹಾಯುದ್ಧದ ವೇಳೆ ಟೈಫಸ್ ಜ್ವರ ಪ್ರಾಣಾಂತಿಕ ಬೇನೆಯಾಗಿ ಕಾಡಿತ್ತು. ಡಿಡಿಟಿಯನ್ನು ರಂಗಪ್ರವೇಶ ಮಾಡಿಸುವವರೆಗೂ (1944) ಪರಿಸ್ಥಿತಿಗೆ ಪರಿಹಾರ ತಿಳಿದಿರಲಿಲ್ಲ.

	ಹೇನು ಕೂರೆಗಳಿಂದ ಬರುವ ಟೈಫಸ್ ಜ್ವರಕ್ಕೂ ಇಲಿಗಳಿಂದ ಬರುವ ಅದೇ ಬೇನೆಗೂ ಇರುವ ವ್ಯತ್ಯಾಸಗಳನ್ನು ನೀಕೊಲ್ ತಯಾರಿಸಿಕೊಟ್ಟ. ಆಮೇಲೆ ಕಾಳಜ್ವರ (ಕಾಲಾ ಆeóÁರ್), ಗೋಮಾರಿ ರೋಗ, ಬ್ರೂಸೆಲ್ಲ ಬೇನೆ, ದಡಾರ, ಆನೆಗೊಬ್ಬರ ಜ್ವರ, ಗಂಟಲಮಾರಿ, ಕ್ಷಯರೋಗಗಳನ್ನು ಕುರಿತು ತಿಳಿವಳಿಕೆ ಪಡೆಯಲು ಏಕಾಣುಜೀವಿಶಾಸ್ತ್ರದಲ್ಲಿ ಹೊಸಬಗೆಗಳನ್ನು ಸಂಶೋಧಿಸಿದ.

	ಜನನ 21 ಸೆಪ್ಟೆಂಬರ್ 1866, ಮರಣ 28 ಫೆಬ್ರವರಿ 1936.
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ